ಕೀಸಲ್‍ಗರ್

ಡೈಆಟಮ್ಸ್ ಎಂಬ ಏಕಾಣುಸಸ್ಯಜೀವಿಗಳ ಸಿಲಿಕಾಯುಕ್ತ ಅವಶೇಷಕ್ಕೆ ಈ ಹೆಸರು. ಡೈಆಟಮೇಷಿಯಸ್ ಮಣ್ಣು ಎಂದು ಸಹ ಹೆಸರಿದೆ. ಸಮುದ್ರವಾಸಿಗಳಾದ ಡೈಆಟಂ ಸಸ್ಯಗಳು ಸತ್ತು ಕೊಳೆತಮೇಲೆ ಮಣ್ಣಿನ ಕಣಗಳಾಗುತ್ತವೆ. ಇವು ಪ್ರಮುಖವಾಗಿ ಸಿಲಿಕದ ರೂಪಗಳು. ಕ್ರಮೇಣ ಈ ಕಣಗಳು ಸಮುದ್ರತಳದಲ್ಲಿ ಶೇಖರಗೊಂಡು ಕೀಸಲ್‍ಗರಿನ ನಿಕ್ಷೇಪದ ರೂಪು ತಳೆಯುತ್ತವೆ. ಇಂಥ ಸಂಚಯನ ವಾರ್ಷಿಕವಾಗಿ 1-500' ಸೆಂ.ಮೀ. ನಷ್ಟು ದಪ್ಪ ಬೆಳೆಯಬಹುದಷ್ಟೆ.  ಕೀಸಲ್‍ಗರ್ ಮಣ್ಣು ಜಲಜಶಿಲೆಯ ರೂಪದಲ್ಲಿ ಕ್ಯಾಲಿಪೋರ್ನಿಯದ ತೀರದಲ್ಲಿ ಹೇರಳವಾಗಿ ದೊರೆಯುತ್ತದೆ. ಇದರ ನಿಕ್ಷೇಪದ ದಪ್ಪ 1,400ಅಡಿ ಗಳಿಗೂ ಮೀರಿ ಉಂಟು. ಇದಲ್ಲದೇ ಡೆನ್‍ಮಾರ್ಕ್, ಜಪಾನ್, ಫ್ರಾನ್ಸ್ ಮತ್ತು ಆಲ್ಜೀರಿಯ ದೇಶಗಳಲ್ಲೂ ಕೀಸಲ್‍ಗರ್ ನಿಕ್ಷೇಪಗಳಿವೆ. ಇವು ಪ್ಲಿಸ್ಟೊಸೀನ್ ಮತ್ತು ತರುವಾಯದ ಕಾಲದ್ದೆಂದು ತಿಳಿದು ಬಂದಿವೆ.

 ಚಾಕ್ ಪುಡಿಯನ್ನು ಹೋಲುವ ಕೀಸಲ್‍ಗರ್‍ನ ಸಂಗ್ರಹದಲ್ಲಿ ಸಿಲಿಕ (Siಔ2) ಇರುವುದುಂಟು. ಕಾಯಿಸಿದ ಅನಂತರ ಅದರಲ್ಲಿರುವ ಅಂಗವಸ್ತುಗಳ ಸರಾಸರಿ ಸೇಕಡ ಪ್ರಮಾಣ ಕೆಳಕಂಡಂತಿದೆ: Siಔ2, 88.I, ಂಟ2ಔ3 4.0, ಈe2ಔ

 1.6, ಅಚಿಔ 1.6, ಒgಔ 0.6, ಇತರ ವಸ್ತುಗಳು 1.4, ಸುಟ್ಟಾಗ ಉಂಟಾಗುವ ಇಳುವರಿ 3.7. ಕೀಸಲ್‍ಗರ್‍ನ ವ್ಯಾಪಕ ಉಪಯೋಗಕ್ಕೆ ಆಧಾರವಾದ ಅದರ ಗುಣ ಲಕ್ಷಣಗಳನ್ನು ಮುಂದೆ ಪ್ರಸ್ತಾಪಿಸಲಾಗಿದೆ. ಅದರ ಕಣಗಳ ಗಾತ್ರ ಅತಿಸೂಕ್ಷ್ಮ. ನೈಸರ್ಗಿಕ ನಮೂನೆಯ 52% ಭಾಗದಷ್ಟು ಕಣಗಳು-2-10 ಮೈಕ್ರಾನ್ ಗಾತ್ರದವು. 26% ಪಾಲಿನಷ್ಟು ಕಣಗಳು 2 ಮೈಕ್ರಾನುಗಳಿಂಗಿಂತ ಕಡಿಮೆ ಮತ್ತು 22% ಭಾಗ 10 ಮೈಕ್ರಾನುಗಳಿಗಿಂತ ಹೆಚ್ಚು ಗಾತ್ರದವು, ಸೋಸುವ ಸಾಧನಗಳಲ್ಲಿ ಕೀಸಲ್‍ಗರ್‍ನ ಬಳಕೆ ಪ್ರಧಾನವಾಗಿ ಕಣಗಾತ್ರವನ್ನು ಅವಲಂಬಿಸಿದೆ, ಪ್ರಕೃತಿದತ್ತವಾದ ಕೀಸಲ್‍ಗರನ್ನು ಸುಟ್ಟರೆ ಊದಾ ಅಥವಾ ಇಟ್ಟಿಗೆ ಬಣ್ಣದ ಪುಡಿ ಉಂಟಾಗುತ್ತದೆ. ಇದರ ಮೂಲಕ ದ್ರವಗಳನ್ನು ದ್ವಿಗುಣಿತ ವೇಗದಲ್ಲಿ ಸೋಸಬಹುದು. ಸ್ರಾವಕವನ್ನು ಬೆರೆಸಿ ಸುಟ್ಟರೆ ಹಾಲು ಬಿಳುಪಾದ ಕೀಸಲ್‍ಗರ್ ದೊರೆಯುವುದು. ಇದರ ಮೂಲಕ ದ್ರವಗಳನ್ನು ಸೋಸುವುದು ಹತ್ತುಪಟ್ಟು ಸರಾಗ.

 1 ಗ್ರಾಂ ಕೀಸಲ್‍ಗರ್ ಪುಡಿಯ ಮೇಲ್ಮೈ ವಿಸ್ತೀರ್ಣ 15-30 ಚದರ ಮೀಟರುಗಳು. ಗಿರಣಿಯಾಡಿಸಿದ ಪುಡಿಯ ಸಾಂದ್ರತೆ ಘನ ಅಡಿಗೆ 5-15 ಪೌಂಡುಗಳಷ್ಟು ಕಡಿಮೆ. 1 ಗ್ರಾಂ ಉತ್ತಮ ದರ್ಜೆಯ ಪುಡಿ 3 ಮಿಲೀ. ಅಥವಾ ಹೆಚ್ಚುದ್ರವವನ್ನು ಹೀರಿಕೊಳ್ಳುವಷ್ಟು ಸರಂಧ್ರವಾಗಿರುವುದು. ನೀರಿನಲ್ಲಿ ಅದ್ರಾವ್ಯವೆನ್ನಬಹುದು. ಕರಗುವ ಉಷ್ಣತೆ 1.000-1.600 ಸೆಂ. ಮಿತಿಯಲ್ಲಿರುತ್ತದೆ. ಹೈಡ್ರೊಫ್ಲೋರಿಕ್ ಆಮ್ಲದ ಹೊರತು ಇತರ ಆಮ್ಲೀಯ ವಸ್ತುಗಳಿಂದ ಪ್ರಭಾವಿತವಾಗುವುದಿಲ್ಲ. ಸುಟ್ಟ ಸುಣ್ಣದಂಥ ಕ್ಷಾರಗಳೊಡನೆ ಸಾಮಾನ್ಯ ಉಷ್ಣತೆಯಲ್ಲಿ ನಿಧಾನವಾಗಿಯೂ ಅಧಿಕ ಉಷ್ಣತೆಯಲ್ಲಿ ಕ್ಷಿಪ್ರವಾಗಿಯೂ ವರ್ತಿಸುವುದು, ಉದಾಹರಣೆಗೆ, ಕೀಸಲ್‍ಗರ್ ಸುಣ್ಣ ಮತ್ತು ಕಲ್ನಾರುಗಳ ತೇವವಾದ ಮಿಶ್ರಣವನ್ನು ಒತ್ತಡದಲ್ಲಿ ಕಾಯಿಸಿ ಉಷ್ಣನಿರೋಧಕ ಇಟ್ಟಿಗೆಗಳನ್ನು ತಯಾರಿಸಲು ಈ ಕ್ರಿಯೆ ನೆರವಾಗುತ್ತದೆ.

 ಉತ್ಪಾದಿಸಿದ ಕೀಸಲ್‍ಗರ್‍ನ ಸುಮಾರು ಅರ್ಧಭಾಗದಷ್ಟು ವಿನಿಯೋಗವಾಗುವುದು. ಸೋಸುವ ಸಾಧನಗಳಲ್ಲಿ ಸಕ್ಕರೆಯ ದ್ರಾವಣ, ಜೀವಿ ವಿರೋಧಕಗಳ ತಯಾರಿಕೆಯಲ್ಲಿ ಒದಗುವ ಹುಳಿತದ್ರವ (ಫರ್ಮೆಂಟೆಡ್ ಲಿಕ್ಕರ್), ಬಟ್ಟಗಳ ನಿರ್ಜಲ ಮಾರ್ಜನದಲ್ಲಿ ಉಪಯೋಗಿಸುವ ನ್ಯಾಫ್ತಾ, ದಂತಧಾವನ ಅಂಜನಗಳು, ಪೆಟ್ರೋಲಿಯಂ ಉತ್ಪನ್ನಗಳು, ಕೊಬ್ಬಿನ ತೈಲಗಳು ಮೊದಲಾದವನ್ನು ಸೋಸುವ ಉಪಕರಣಗಳಲ್ಲಿ ಕೀಸಲ್‍ಗರ್ ಇರುತ್ತದೆ. ಫೋರ್ ಡ್ರಿನಿಯರ್ ಯಂತ್ರದ ಮೇಲೆ ಕಾಗದದ ರಾಶಿ ತನ್ನ ತೇವಾಂಶವನ್ನು ಬೇಗ ಕಳೆದುಕೊಳ್ಳುವಂತೆ ಮಾಡುವಲ್ಲಿಯೂ, ಆಲ್ಕೊಹಾಲ್ ಪಾನೀಯಗಳು ಮತ್ತು ಹಣ್ಣಿನ ರಸಗಳಲ್ಲಿ ಇರುವ ವಿಲಂಬಿತ ವಸ್ತುಗಳ ನಿವಾರಣೆಯಲ್ಲಿಯೂ ಕೀಸಲ್‍ಗರ್‍ನ ಉಪಯೋಗ ಉಂಟು, ಪ್ಲಾಸ್ಟಿಕ್ಕುಗಳು, ಕಾಗದ, ರಬ್ಬರ್ ಮತ್ತು ಕೃತಕ ಗೊಬ್ಬರಗಳಿಗೆ ಇದು ಫಿಲ್ಲರ್ ಆಗಿ ವರ್ತಿಸುವುದು, ಪೆಯಿಂಟುಗಳಿಗೆ ಕೂಡಿಸಿದರೆ ಅವುಗಳ ಆಚ್ಛಾದನಾ ಸಾಮಥ್ರ್ಯವನ್ನು ಹೆಚ್ಚಿಸಬಲ್ಲುದು. ಅದರ ಗಣನೀಯ ಮೇಲ್ಮೈ ವಿಸ್ತೀರ್ಣದ ಫಲವಾಗಿ ಕೀಸಲ್‍ಗರ್‍ನ ಮೇಲೆ ಹರಡಿರುವ ವೇಗವರ್ಧಕ ಉತ್ತಮವಾಗಿ ಕಾರ್ಯನಿರ್ವಹಿಸುವುದು. ನೈಟ್ರೇಟ್ ಗೊಬ್ಬರಗಳೊಂದಿಗೆ ಬೆರೆಸಿದರೆ ಕಣಗಳು ಹೆಂಟೆಗಳಂತಾಗಿ ತೊಂದರೆ ಕೊಡುವುದಿಲ್ಲ. ಫಿಲ್ಲರಾಗಿ ಬಳಸಿದ ಕೀಸಲ್‍ಗರ್‍ನ್ನು ಮುಂಚೆಯೇ ಸುಣ್ಣ ಅಥವಾ ಮ್ಯಾಗ್ನೀಸಿಯ ಸ್ರಾವಕದೊಡನೆ ಸುಟ್ಟಿದ್ದರೆ ಉತ್ತಮ ಫಲಿತಾಂಶ ದೊರೆಯುವುದು.

 ಕೀಸಲ್‍ಗರ್‍ನ ಉಷ್ಣನಿರೋಧಕ ಸಾಮಥ್ರ್ಯವು ಅದರ ಅಲ್ಪಸಾಂದ್ರತೆ, ರಂಧ್ರಗಳ ಸೂಕ್ಷ್ಮತೆ. 800-1900 ಸೆಂ. ಉಷ್ಣತಾ ಮಿತಿಯಲ್ಲೂ ಹೆಚ್ಚು ಸಂಕುಚಿತವಾಗದೆ ಉಳಿಯುವ ಸಾಮಥ್ರ್ಯ ಈ ಗುಣಗಳನ್ನು ಅವಲಂಬಿಸಿದೆ. ಇದಕ್ಕಾಗಿ ಕೀಸಲ್‍ಗರ್‍ಯುಕ್ತ ಶಿಲೆಯನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸುತ್ತಿದ್ದರು. ಅನಂತರ ಕೀಸಲ್‍ಗರ್ ಪುಡಿಯನ್ನು ಜೇಡಿಮಣ್ಣು ಮತ್ತು ನೀರಿನೊಡನೆ ಕಲಸಿ ಸಾಮಾನ್ಯ ಇಟ್ಟಿಗೆಗಳನ್ನು ರೂಪಿಸುವಂತೆ ನಿರ್ದಿಷ್ಟ ಆಕಾರಕ್ಕೆ ಕತ್ತರಿಸಿ ಒಣಗಿಸಿ ಸುಟ್ಟು ಉಪಯೋಗಿಸುವುದು ರೂಢಿಗೆ ಬಂತು. ಈಗ ಅದನ್ನು ಅಗಲವಾದ ಹಲಗೆಗಳ ರೂಪದಲ್ಲಿ ಬಳಸುತ್ತಾರೆ. ಇಂಥ ಉಷ್ಣನಿರೋಧಕ ಹಾಳಿಗಳನ್ನು ಮಾಡಲು ಕೀಸಲ್‍ಗರ್ ಕಲ್ನಾರು ಮತ್ತು ಬೆಂಟೊನೈಟ್ ಅಥವಾ ಮಾಗ್ನಸೈಟ್ ಅಥವಾ ಸುಣ್ಣದ ಹಾಲಿನೊಡನೆ ಕುದಿಸಿ ಪಡೆದ ಸಿಲಿಕೇಟಿನಂಥ ಬಂಧನ ವಸ್ತುವಿರುವ ಮಿಶ್ರಣ ಅಗತ್ಯ. ಹುಡಿಯಾದ ಕೀಸಲ್‍ಗರ್‍ನ್ನು ಕುಲುಮೆಯ ಗೋಡೆಗಳ ನಡುವೆ ತುಂಬಿದಾಗಲೂ ಅದು ಯಶಸ್ವಿಯಾಗಿ ಕುಲುಮೆಯ ಉಷ್ಣವನ್ನು ಕಾಪಾಡಿಕೊಂಡು ಬರಬಲ್ಲದು.

 ಆಲ್ಛ್ರೆಡ್ ನೊಬೆಲ್ (ನೋಡಿ- ನೊಬೆಲ್,-ಆಲ್ಫ್ರೆಡ್-ಬೆರ್ನಾರ್ಡ್) ನೈಟ್ರೊಗ್ಲಿಸರಿನನ್ನು ಕಂಡುಹಿಡಿದ ಅನಂತರ ಕೀಸಲ್‍ಗರಿನ ಪ್ರಾಮುಖ್ಯ ಹೆಚ್ಚಿತು. ನೈಟ್ರೊಗ್ಲಿಸರಿನ್ ತೀವ್ರ ಆಸ್ಟೋಟಕ ಗುಣವುಳ್ಳ ವಸ್ತು. ಅದನ್ನಿಟ್ಟಿರುವ ಪಾತ್ರೆ ಸ್ವಲ್ಪ ಅಲುಗಾಡಿದರೂ ಸಾಕು ಭಯಂಕರ ಸ್ಫೋಟವಾಗುತ್ತದೆ. ಆದ್ದರಿಂದ ಅದನ್ನು ದ್ರವರೂಪದಲ್ಲಿ ಸಾಗಿಸುವಂತಿಲ್ಲ. ಆದರೆ ಅದನ್ನು ಕೀಸಲ್‍ಗರ್‍ನಿಂದ ಅವಶೋಷಿಸಿ ಉತ್ಪನ್ನ ವಸ್ತುವನ್ನು ನಿರಾತಂಕವಾಗಿ ಊರಿಂದೂರಿಗೆ ರವಾನಿಸಬಹುದು. ಹೀಗೆ ನೈಟ್ರೊಗ್ಲಿಸರಿನ್ ಹೀರಿಕೊಂಡು ಕೀಸಲ್‍ಗರನ್ನು ಡೈನಮೈಟ್ ಎಂದು ಕರೆಯುತ್ತಾರೆ. ಈಗ ಕೀಸಲ್‍ಗರಿಗಿಂತ ಉತ್ತಮ ಅವಶೋಷಕಗಳು ದೊರೆಯುವುದರಿಂದ ಡೈನಮೈಟಿನ ತಯಾರಿಕೆಯಲ್ಲಿ ಅದರ ಉಪಯೋಗ ನಿಂತುಹೋಗಿದೆ. ಆದಾಗ್ಯೂ, ಇತರ ದ್ರವಗಳನ್ನು ಹೀರಲು ಕೀಸಲ್‍ಗರ್ ಬಳಸಲ್ಪಡುತ್ತಿದೆ. ಉದಾಹರಣೆಗೆ, ಯಂತ್ರಾಗಾರಗಳ ಮೆಷಿನ್ ಷಾಪುಗಳ ನೆಲದ ಮೇಲೆ ಎಣ್ಣೆಚೆಲ್ಲಿರುವುದು ಸಾಮಾನ್ಯ. ಅಂಥ ನೆಲದ ಮೇಲೆ ಕೀಸಲ್‍ಗರ್ ಪುಡಿಯನ್ನು ಉದುರಿಸಿ ಗುಡಿಸಿದರೆ ಸ್ವಚ್ಚವಾಗುತ್ತಿದೆ. ಸಹಸ್ರಾರು ಟನ್ನುಗಳಷ್ಟು ಕೀಸಲ್‍ಗರ್ ಇದರ ಸಲುವಾಗಿ ವಿನಿಯೋಗವಾಗುತ್ತಿದೆ.       

  (ಎಚ್.ಜಿ.ಎಸ್.; ಎಂ.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ